ಮಯೂರ ಶರ್ಮ -
ಆದ್ಯ ಕದಂಬ ಮನೆತನದ ಅರಸ [ಸುಮಾರು 325-45]. ಆ ವಂಶದ ಆಳ್ವಿಕೆಯ ಸ್ಥಾಪಕ. ಈತನ ತಂದೆ ಬಂಧುಷೇಣ. ತಾತ ವೀರಶರ್ಮ. ಇವರು ಮಾನವ್ಯಗೋತ್ರದ ವಂಶದವರಾಗಿದ್ದು ಮೂಲತಃ ತಾಳಗುಂದ ಗ್ರಾಮಕ್ಕೆ ಸೇರಿದವರೆಂದು ತೋರುತ್ತದೆ. ತಾನಿದ್ದಲ್ಲಿಯೇ ಲಭ್ಯವಿದ್ದ ಎಲ್ಲ ಶಾಸ್ತ್ರಗಳನ್ನೂ ಕಲಿತ ಈತ ಮುಂದೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತನ್ನ ಗುರುವಾದ [ಅಂದರೆ ತಾತನಾದ] ವೀರಶರ್ಮನೊಡನೆ ಅಂದು ಪ್ರಸಿದ್ಧವಾಗಿದ್ದ ತಮಿಳುನಾಡಿನ ಕಾಂಚೀಪುರದ ಘಟಿಕಾಸ್ಥಾನಕ್ಕೆ ಹೋದ. ಆ ಸಂದರ್ಭದಲ್ಲಿ ಈತನಿಗೆ ಅಲ್ಲಿಯ ಅಶ್ವಸಂಸ್ಥೆಯೊಡನೆ ಘರ್ಷಣೆಯುಂಟಾಗಿ ವಿರಸವೇರ್ಪಟ್ಟಿತು. ಕುಶ, ಸಮಿತ್ತು, ತುಪ್ಪದ ಸೌಟು ಇತ್ಯಾದಿಗಳನ್ನು ಹಿಡಿದು ಯಜ್ಞಯಾಗಾದಿಗಳನ್ನು ಮಾಡಿದ ಬ್ರಾಹ್ಮಣ ಕತ್ತಿ ಹಿಡಿದ ಕ್ಷತ್ರಿಯನಿಂದ ಅವಮಾನಿತನಾದ. ಇದು ಈತ ಬ್ರಾಹ್ಮಣ ವೃತ್ತಿ ತ್ಯಜಿಸಿ ಕ್ಷಾತ್ರವೃತ್ತಿಯನ್ನು ಅವಲಂಬಿಸುವಂತೆ ಮಾಡಿತು. ರೋಷದಿಂದ ಕೆರಳಿದ ಮಯೂರಶರ್ಮ ಕತ್ತಿ ಹಿಡಿದ. ಸೇನೆಯೊಂದನ್ನು ಕಟ್ಟಿ ಪಲ್ಲವಸೇನೆಯನ್ನು ಎದುರಿಸಿದ. ಶ್ರೀಪರ್ವತದವರೆಗಿನ ಪ್ರದೇಶವನ್ನು ಆಕ್ರಮಿಸಿ ಸ್ವತಂತ್ರ ರಾಜ್ಯವೊಂದಕ್ಕೆ ಅಸ್ತಿಭಾರ ಹಾಕಿದ. ಬೃಹದ್ಬಾಣರನ್ನು ಸೋಲಿಸಿ ಅವರಿಂದ ಕಪ್ಪ ವಸೂಲು ಮಾಡಿದ. ಈತನನ್ನು ಸೋಲಿಸಲಾಗದ ಪಲ್ಲವರು ಕೂನೆಗೆ ಪಶ್ಚಿಮ ಸಮುದ್ರದಿಂದ ಪ್ರೇಹರಾ (ಈಗಿನ ಘಟಪ್ರಭಾ ನದಿ) ವರೆಗಿನ ಪ್ರದೇಶದಲ್ಲಿ ಈತನ ಅಧಿಪತ್ಯ ಒಪ್ಪಿಕೂಂಡರು. ಚಂದ್ರವಳ್ಳಿಯಲ್ಲಿ ದೊರೆತ ಶಾಸನದಲ್ಲಿ ಈತ ತ್ರೈಕೂಟಕ, ಆಭೀರ, ಪಲ್ಲವ, ಪಾರಿಯಾತ್ರಕ, ಶಕಸ್ಥಾನ, ಮೊಕರಿ, ಪುನ್ನಾಟ, ಸಯಿಂದಕ ಮುಂತಾದ ದೇಶ ಅಥವಾ ಅರಸು ಮನೆತವದವರನ್ನು ಸೋಲಿಸಿ ವಶಪಡಿಸಿಕೊಂಡನೆಂದು ಹೇಳಿದೆ. ಆದರೆ ಇದರಲ್ಲಿ ಸ್ವಲ್ಪ ಮಟ್ಟಿಗೆ ಉತ್ಪ್ರೇಕ್ಷೆ ಇದ್ದಂತಿದೆ. ಶಕರು ಅಧಿಕಾರದಲ್ಲಿದ್ದ ಉಜ್ಜಯಿನಿಗೆ ಹಾಗೂ ಮೌಕರಿ ಆಳುತ್ತಿದ್ದ ಈಗಿನ ರಾಜಸ್ಥಾನದವರೆಗೂ ಈತ ದಂಡಯಾತ್ರೆ ಹೋಗಿದ್ದನೆಂಬುದು ಸತ್ಯದೂರವೆನಿಸುತ್ತದೆ. ಈತ ಸುಮಾರು 20 ವರ್ಷಗಳ ಕಾಲ ರಾಜ್ಯಭಾರ ಮಾಡಿದನೆಂದು ಊಹಿಸಲಾಗಿದೆ.

	ಈತನನ್ನು ದ್ವಿಜೋತ್ತಮನೆಂದು ಶಾಸನಗಳು ಬಣ್ಣಿಸಿ ಶರ್ಮ ಎಂಬ ನಾಮಾಂತ್ಯವನ್ನು ನೀಡಿವೆ. ಆದರೆ ಈತನ ಅನಂತರ ಆಳಿದವರೆಲ್ಲರೂ ಕ್ಷಾತ್ರವೃತ್ತಿ ಅವಲಂಬಿಸಿದ ಕಾರಣ ವರ್ಮರೆನಿಸಿಕೊಂಡರು. ಈತನನ್ನು ಅನಂತರದ ಶಾಸನಗಳು ಮಯೂರವರ್ಮನೆಂದು ಕರೆದಿವೆ.

	11-12ನೆಯ ಶತಮಾನದ ಶಾಸನಗಳಲ್ಲಿ ಮಯೂರಶರ್ಮನ ಕುರಿತು ವಿಚಿತ್ರ ಕಥೆಗಳು ನಿರೂಪಿತವಾಗಿವೆ. ಕದಂಬವಂಶದ ಮೂಲಪುರುಷ ತ್ರಿಲೋಚನ (ಮುಕ್ಕಣ್ಣ) ಕದಂಬ. ಕದಂಬವೃಕ್ಷವೊಂದರ ಕೆಳಗೆ ಬಿದ್ದ ಶಿವನ ಬೆವರಿನಿಂದ ಹುಟ್ಟಿದ ಈತ ಕದಂಬನೆನಿಸಿಕೊಂಡ. ಈತನ ಮಗ ಮಯೂರಶರ್ಮನನ್ನು ಕದಂಬವಂಶದ ಮೂಲಪುರುಷ ಎಂದು ಕೆಲವು ಶಾಸನಗಳು ಹೇಳಿವೆ. ಕದಂಬವೃಕ್ಷದ ಕೆಳಗೆ ಜನಿಸಿದಾತನೇ ಮಯೂರಶರ್ಮನೆಂದೂ ಆತನಿಗೆ ತ್ರಿನೇತ್ರಗಳಿದ್ದ ಕಾರಣ ಕಿರೀಟವನ್ನು ತಲೆಯ ಮೇಲಿಡಲಾಗದೆ ಮೊಣಕಾಲಿನ ಚಿಪ್ಪಿಗೆ ಕಟ್ಟಲಾಯಿತೆಂದೂ ಹೇಳುವ ಸಾಂಪ್ರದಾಯಿಕ ಕಥೆ ಕೆಲವು ಶಾಸನಗಳಲ್ಲಿದೆ. ಮಯೂರಶರ್ಮ ಆನಂದ ಜಿನವ್ರತೀಂದ್ರನ ಸೋದರಿಯ ಮಗನೆಂದು ಜೈನಸಾಂಪ್ರಾದಾಯಿಕ ಕಥೆಯಲ್ಲಿ ಹೇಳಲಾಗಿದೆ. ಶತಮಾನಗಳ ಅನಂತರ ಕದಂಬ ಮೂಲದ ಸ್ವರೂಪ ನೆನಪಿನಿಂದ ಮಾಸಿಹೋದಾಗ ಆ ಮನೆತನದ ಹಿರಿಮೆ ತೋರಿಸಲು ಕವಿಗಳು ಹರಿಸಿದ ಕಲ್ಪನೆಗಳ ಪರಿಣಾಮಗಳಿವು.

	11ನೆಯ ಶತಮಾನದಲ್ಲಿ ಧಾರಾವಾಡ ಜಿಲ್ಲೆಯ ಬಂಕಾಪುರ ಮತ್ತು ಹಾನಗಲ್ಲು ತಾಲ್ಲೂಕುಗಳ ಸುತ್ತ¯ ಪ್ರದೇಶದಲ್ಲಿ ಕದಂಬ ಮನೆತನದವರು ಮಾಂಡಲಿಕರಾಗಿ ಆಳುತ್ತಿದ್ದರು. 1044-45ರಲ್ಲಿ ಆ ಮನೆತನದ ಮಯೂರವರ್ಮ ಪಾನುಂಗಲ್ಲನ್ನು ಆಳುತ್ತಿದ್ದ. ಪಾನುಂಗಲ್ಲು-500 ಪ್ರಾಂತ್ಯದ ಮನ್ನೆಯ ಸ್ವಾಮ್ಯ ಆತನದಾಗಿತ್ತು. ಚಾಳುಕ್ಯ ಅರಸ ಮೊದಲನೆಯ ಸೋಮೇಶ್ವರನ ಮಾಂಡಲಿಕನಾಗಿದ್ದ. ಆತ ಅರಸನ ಸೋದರತ್ತೆ ತಂದೆಯಾದ ಜಯಸಿಂಹನ ಸೋದರಿ ಅಕ್ಕಾದೇವಿಯನ್ನು ಮದುವೆಯಾಗಿದ್ದಂತೆ ತೋರುತ್ತದೆ. ಆತ ಹರಿಪಂಪನ (ಅರಿಕೇಸರಿ) ಮಗ. ತೋಯಿಮದೇವ ಮತ್ತು ಅರಿಕೇಸರಿ ಆತನ ಇಬ್ಬರು ಮಕ್ಕಳು. ಇವರನ್ನು ಬಂಕಾಪುರದ ಕದಂಬರೆಂದು ಹೆಸರಿಸಬಹುದು.

	ಹಾನಗಲ್ಲಿನ ಕದಂಬ ಶಾಖೆಗೆ ಸೇರಿದ ಇನ್ನೊಬ್ಬ ಮಯೂರವರ್ಮ ಚಾಳುಕ್ಯ ಮುಮ್ಮಡಿ ಸೋಮೇಶ್ವರನ ಮಾಂಡಲಿಕ ಇವನು ಪಾನುಂಗಲ್ಲು ಪ್ರಾಂತ್ಯ ಆಳುತ್ತಿದ್ದಾಗ ಹೊಯ್ಸಳ ವಿಷ್ಣುವರ್ಧನ ಮೇಲಿಂದ ಮೇಲೆ ಈ ಪ್ರದೇಶದ ಮೇಲೆ ದಾಳಿ ಮಾಡಿದ. ಚಾಳುಕ್ಯರಿಗೆ ನಿಷ್ಠೆ ತೋರಿದ ಈ ಮಯೂರವರ್ಮ ತಾನು ಜೀವಿಸಿರುವತನಕವೂ ಹೊಯ್ಸಳರನ್ನು ಯಶಸ್ವಿಯಾಗಿ ವಿರೋಧಿಸಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ